ನವದೆಹಲಿ: ಪೊಲೀಸ್ ಅಧಿಕಾರಿಯೊಬ್ಬರ ಪುತ್ರ ಕುಡಿದು ಮರ್ಸಿಡಿಸ್ ಕಾರು ಚಲಾಯಿಸುತ್ತಿದ್ದ ವೇಳೆ ಸಂಭವಿಸಿದ ಅಪಘಾತದಲ್ಲಿ 70 ವರ್ಷದ ವೃದ್ಧೆಯೊಬ್ಬರು ಮೃತಪಟ್ಟಿರುವ ಘಟನೆ ದೆಹಲಿಯ ನರೇಲಾದಲ್ಲಿ ನಡೆದಿದೆ.
ಮಾಮುರ್‌ಪುರದ ಹಿಮಾಲಯ ಅಪಾರ್ಟ್‌ಮೆಂಟ್ ಹೊರಗೆ ಬೆಳಗಿನ ಜಾವ ನಡೆದುಕೊಂಡು ಹೋಗುತ್ತಿದ್ದ ಊರ್ಮಿಳಾ ಎಂಬ ವೃದ್ಧೆಗೆ ವೇಗವಾಗಿ ಬಂದ ಮರ್ಸಿಡಿಸ್ ಕಾರು ಡಿಕ್ಕಿ ಹೊಡೆದಿದೆ. ಬಳಿಕ ಕಾರು ಮತ್ತೊಂದು ವಾಹನಕ್ಕೂ ಡಿಕ್ಕಿ ಹೊಡೆದಿದ್ದು, ಅಪಘಾತದ ಪರಿಣಾಮ ಊರ್ಮಿಳಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಅಪಘಾತದ ವೇಳೆ ಮರ್ಸಿಡಿಸ್ ಕಾರಿನಲ್ಲಿ ಹರಿಯಾಣ ಪೊಲೀಸ್ ಇಲಾಖೆಯ ಸಬ್ ಇನ್ಸ್‌ಪೆಕ್ಟರ್ ಪುತ್ರ ಶುಭಂ ಇದ್ದ ಎನ್ನಲಾಗಿದೆ. ಘಟನೆ ವೇಳೆ ಆತ ಮದ್ಯದ ಅಮಲಿನಲ್ಲಿ ಕಾರು ಚಲಾಯಿಸುತ್ತಿದ್ದ ಎಂದು ಆರೋಪಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.









