ಲಕ್ನೋ: ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮೊದಲ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಹುದ್ದೆಯ ಆಯ್ಕೆ ಪ್ರಕ್ರಿಯೆ ಅಂತಿಮ ಹಂತ ತಲುಪಿದೆ. ಸಿಇಒ ಆಯ್ಕೆಗಾಗಿ ರಚಿಸಲಾಗಿದ್ದ ಶೋಧನಾ ಸಮಿತಿಯು ಸಂದರ್ಶನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಟ್ರಸ್ಟ್ ಎಕ್ಸ್ ಮೂಲಕ ತಿಳಿಸಿದೆ.
ಆಗಸ್ಟ್ 11 ಮತ್ತು 12ರಂದು ಅಯೋಧ್ಯೆಯ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಆವರಣದಲ್ಲಿ ಸಿಇಒ ಹುದ್ದೆಯ ಅಭ್ಯರ್ಥಿಗಳ ಅಂತಿಮ ಸುತ್ತಿನ ಸಂದರ್ಶನಗಳನ್ನು ನಡೆಸಲಾಗಿದೆ. ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಅರ್ಹ ಅಭ್ಯರ್ಥಿಗಳ ಪೈಕಿ ಅಂತಿಮ ಹಂತದ ಆಯ್ಕೆ ಪ್ರಕ್ರಿಯೆಯನ್ನು ಸಮಿತಿಯು ಪೂರ್ಣಗೊಳಿಸಿದೆ ಎಂದು ಟ್ರಸ್ಟ್ ತಿಳಿಸಿದೆ.
ಇದೀಗ ಶೋಧನಾ ಸಮಿತಿಯ ಶಿಫಾರಸಿನ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ರಾಮ ಮಂದಿರ ನಿರ್ಮಾಣದ ಬಳಿಕ ಆಡಳಿತಾತ್ಮಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಮೊದಲ ಬಾರಿಗೆ ಸಿಇಒ ಹುದ್ದೆ ಸೃಷ್ಟಿಸಲಾಗಿದ್ದು, ನೇಮಕಾತಿಯ ಕುರಿತು ಅಧಿಕೃತ ಘೋಷಣೆಯತ್ತ ಎಲ್ಲರ ಗಮನ ನೆಟ್ಟಿದೆ.









