ನ್ಯೂಯಾರ್ಕ್ನ ಸ್ಪ್ರಿಂಗ್ ಸ್ಟ್ರೀಟ್ ಸಬ್ವೇ ನಿಲ್ದಾಣದಲ್ಲಿ ರೈಲು ಹಳಿಯ ಮೇಲೆ ಕುಳಿತಿದ್ದ 24 ವರ್ಷದ ಭಾರತೀಯ ಮೂಲದ ಯುವತಿ ಮಲೈಕಾ ಚಿತ್ರೆ ಹಾಗೂ ಆಕೆಯ ನೇಪಾಳಿ-ಅಮೆರಿಕನ್ ಸ್ನೇಹಿತ ನವಂ ಕೌಲ್ ರೈಲು ಡಿಕ್ಕಿಗೆ ಮೃತಪಟ್ಟಿದ್ದಾರೆ. ನ್ಯೂಜೆರ್ಸಿಯ ಡೇಟನ್ ನಿವಾಸಿಯಾಗಿದ್ದ ಮಲೈಕಾ ಹಾಗೂ ಸೇರೆವಿಲ್ಲೆ ನಿವಾಸಿ ಕೌಲ್ ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಘಟನೆಗೂ ಕೆಲವೇ ಕ್ಷಣಗಳ ಮೊದಲು ಇಬ್ಬರೂ ರೈಲು ಹಳಿಯ ಮೇಲೆ ಕುಳಿತಿದ್ದ ದೃಶ್ಯವನ್ನು ದಾರಿಹೋಕರೊಬ್ಬರು ಮೊಬೈಲ್ನಲ್ಲಿ ಸೆರೆಹಿಡಿದಿದ್ದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇಬ್ಬರೂ ಹಳಿಯ ಮೇಲೆ ಕುಳಿತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಹಿರಿಯ ಅಧಿಕಾರಿಗಳ ಪ್ರಕಾರ, ಮಲೈಕಾ ನಗುತ್ತಾ ಕೌಲ್ ಅವರನ್ನು ತಮ್ಮತ್ತ ಎಳೆಯುತ್ತಿದ್ದ ದೃಶ್ಯವನ್ನು ರೈಲು ಚಾಲಕಿ ಗಮನಿಸಿದ್ದರು. ಕೆಲವೇ ಕ್ಷಣಗಳಲ್ಲಿ ರೈಲು ಇಬ್ಬರಿಗೂ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.









