ಬೆಂಗಳೂರಿನ ರಾಜಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ 7 ಜನರ ಭೀಕರ ಕೊಲೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಪ್ರಕರಣದ ಪ್ರಮುಖ ಆರೋಪಿ ಇಂದು ಶೇಖರ್‌ನನ್ನು ಪೊಲೀಸರು ಬಂಧಿಸಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುವಂದಿದೆ. ಘಟನೆಯ ಬೆನ್ನಲ್ಲೇ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರು ರಾಜಾಜಿನಗರ ಠಾಣೆಗೆ ಭೇಟಿ ನೀಡಿ ತನಿಖೆಯ ಪ್ರಗತಿ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಪ್ರಮುಖ ವಿವರಗಳನ್ನು ಹಂಚಿಕೊಂಡಿದ್ದಾರೆ.
ಪ್ರಕರಣ ಸಂಬಂಧ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, 'ನವೆಂಬರ್ 3ರಂದು ತುಂಗಮ್ಮ ಎಂಬುವವರು ನೀಡಿದ ಮಿಸ್ಸಿಂಗ್ ಕೇಸ್ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದರು. ಈ ವೇಳೆ ಇದು ಕೊಲೆ ಪ್ರಕರಣ ಎಂಬುದು ಬೆಳಕಿಗೆ ಬಂದಿದೆ. ಪ್ರಸ್ತುತ ಎಫ್‌ಐಆರ್ (ಕ್ರೈಂ ನಂ. 165) ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಈವರೆಗೆ ಒಂದು ಮೃತದೇಹ ಸಿಕ್ಕಿದೆ,' ಎಂದು ಅವರು ತಿಳಿಸಿದ್ದಾರೆ.
ಆರೋಪಿ ಹೇಳಿರುವುದೇನು?
ರಾಜಾಜಿನಗರದಲ್ಲೇ ವಾಸವಿದ್ದ ಆರೋಪಿಯು ಕಳೆದ 15 ರಿಂದ 20 ದಿನಗಳ ಅವಧಿಯಲ್ಲಿ ಹಂತ ಹಂತವಾಗಿ ಏಳು ಜನರನ್ನು ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಈಗ 7 ವರ್ಷದ ಪುನೀತ್ ಎಂಬ ಮಗುವಿನ ಮೃತದೇಹ ಮಾತ್ರ ಸಿಕ್ಕಿದ್ದು, ಉಳಿದ 6 ಮೃತದೇಹಗಳನ್ನು ವಿವಿಧ ಕಡೆಗಳಲ್ಲಿ ಎಸೆದಿರುವುದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ. ಶವಗಳ ಪತ್ತೆಗೆ ಶೋಧ ಕಾರ್ಯ ಚುರುಕುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿಶೇಷ ತನಿಖಾ ತಂಡಗಳ ರಚನೆ
ಪ್ರಕರಣದ ತೀವ್ರ ತನಿಖೆಗಾಗಿ ಪಶ್ಚಿಮ ಮತ್ತು ಉತ್ತರ ವಿಭಾಗದ ಡಿಸಿಪಿಗಳ ನೇತೃತ್ವದಲ್ಲಿ ಎರಡು ಪ್ರತ್ಯೇಕ ತನಿಖಾ ತಂಡಗಳನ್ನು ರಚಿಸಲಾಗಿದೆ. ಇನ್ನೂ ಕೊಲೆಗೆ ತನ್ನ ಅಪ್ರಾಪ್ತ ಮಗಳೇ ಪ್ಲಾನ್ ರೂಪಿಸಿಕೊಟ್ಟಿದ್ದಾಗಿ ಆರೋಪಿ ಹೇಳಿಕೊಂಡಿದ್ದಾನೆ. ಕೃತ್ಯದಲ್ಲಿ ಅಪ್ರಾಪ್ತ ಮಗಳು ಹಾಗೂ ಇನ್ನೊಬ್ಬ ಮೈನರ್ ಬಾಲಕನ ಸಹಾಯ ಪಡೆದಿರುವ ಬಗ್ಗೆ ಮಾಹಿತಿ ಲಭ್ಯವಿದ್ದು, ಅವರನ್ನೂ ವಿಚಾರಣೆಗೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಮೇಲ್ನೋಟಕ್ಕೆ ಆರೋಪಿಯು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವುದು ತಿಳಿದುಬಂದಿದೆ. ಕೊಲೆಯಾದ ಬಳಿಕ ಯಾರಿಗೂ ಅನುಮಾನ ಬಾರದಂತೆ ಮೃತರ ಮೊಬೈಲ್ ಫೋನ್‌ಗಳಿಂದ ಆರೋಪಿಯೇ ಸ್ವತಃ ಸಂದೇಶಗಳನ್ನು ಕಳುಹಿಸುತ್ತಿದ್ದ. ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಈ ಆರೋಪಿ ಶೇಖರ್ ಮೇಲೆ ಸುಮಾರು 6-7 ವರ್ಷಗಳ ಹಿಂದೆ ಚೈನ್ ಸ್ನಾಂಚಿಂಗ್ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಆತನನ್ನು ಬಂಧಿಸಲಾಗಿತ್ತು ಎಂದು ಕಮಿಷನರ್ ಮಾಹಿತಿ ನೀಡಿದ್ದಾರೆ.
ಒಂದರ ಹಿಂದೆ ಒಂದರಂತೆ ವ್ಯಕ್ತಿಗಳು ನಾಪತ್ತೆಯಾಗಿದ್ದರೂ ಆರಂಭದಲ್ಲಿ ಯಾವುದೇ ದೂರು ದಾಖಲಾಗಿರಲಿಲ್ಲ. ನವೆಂಬರ್ 3ರ ನಂತರ ದಾಖಲಾದ ದೂರಿನ ನಂತರವೇ ಈ ರಕ್ತಸಿಕ್ತ ಘಟನೆ ಬೆಳಕಿಗೆ ಬಂದಿದೆ. ಆರೋಪಿ ನೀಡುತ್ತಿರುವ ವೈಯಕ್ತಿಕ ಕಾರಣಗಳನ್ನು ಪೊಲೀಸರು ವಿವಿಧ ದೃಷ್ಟಿಕೋನಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಇನ್ನೂ ಈ ಘಟನೆ ಹೇಗಾಯ್ತು, ನಿಖರ ಕಾರಣ ಏನು ಎನ್ನುವ ಮಾಹಿತಿ ತಿಳಿದುಬರಬೇಕಿದೆ. ಒಟ್ಟಿನಲ್ಲಿ ಈ ಪ್ರಕರಣ ಯಾವ ತಿರುವು ಪಡೆದುಕೊಳ್ಳುತ್ತದೆ ಎಂದು ಕಾದುನೋಡಬೇಕಿದೆ.









