2027ರ ಏಪ್ರಿಲ್ 20ರಿಂದ 22ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೂರು ದಿನಗಳ ಕಾಲ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯಲಿದೆ. ಇದು ನಿಜವಾದ ಅರ್ಥದಲ್ಲಿ ವಿಶ್ವ ಮಟ್ಟದ ಉಪಕ್ರಮವಾಗಿದ್ದು, ಇದಕ್ಕೆ ಪೂರಕವಾಗಿ ನೂತನ ವೈಮಾಂತರಿಕ್ಷ ಮತ್ತು ರಕ್ಷಣಾ ನೀತಿ (2026-31), ಕೆಐಎಡಿಬಿ ಮೂಲಕ ಡಿಜಿಟಲ್ ಕೈಗಾರಿಕಾ ಭೂಬ್ಯಾಂಕ್ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಗುರುವಾರ ಹೇಳಿದ್ದಾರೆ.
ಮುಂಬರುವ ಹೂಡಿಕೆದಾರರ ಸಮಾವೇಶಕ್ಕೆ ಪೂರ್ವಭಾವಿಯಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಾವೇಶದ ಭಾಗವಾಗಿ ವೆಂಚುರೈಸ್‌ನ ಮೂರನೇ ಆವೃತ್ತಿ ಹಾಗೂ ಕೆಐಎಡಿಬಿ ಡಿಜಿಟಲ್ ಕೈಗಾರಿಕಾ ಭೂ ಬ್ಯಾಂಕ್‌ಗೆ ಚಾಲನೆ ನೀಡಿದ್ದೇವೆ. ಇವೆರಡೂ ವಿಭಿನ್ನ ಉದ್ದೇಶಗಳನ್ನು ಹೊಂದಿದ್ದರೂ, ಒಂದಕ್ಕೊಂದು ಪೂರಕವಾಗಿವೆ. ಭವಿಷ್ಯದ ಉದ್ಯಮಗಳನ್ನು ರೂಪಿಸುವುದರ ಬಗ್ಗೆ ಗಮನಹರಿಸಿದರೆ, ಮತ್ತೊಂದು ಇಂದೇ ಆ ಉದ್ಯಮಗಳನ್ನು ಸ್ಥಾಪಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ. ಮಹತ್ವಾಕಾಂಕ್ಷೆಗೆ ಕಾರ್ಯರೂಪದ ಬೆಂಬಲ ನೀಡುವುದೇ ಜಾಗತಿಕ ಹೂಡಿಕೆದಾರರ ಸಮಾವೇಶ- 2027ರ ಆಶಯ ಎಂಬುದನ್ನು ಈ ಎರಡೂ ಉಪಕ್ರಮಗಳು ಸಾರುತ್ತವೆʼ ಎಂದು ಅವರು ಹೇಳಿದ್ದಾರೆ.
65% ಹೂಡಿಕೆ ಕಾರ್ಯರೂಪಕ್ಕೆ
ಹಿಂದಿನ ಹೂಡಿಕೆದಾರರ ಸಮಾವೇಶದಲ್ಲಿ ನಾವು ದೊಡ್ಡ ಗುರಿಯನ್ನು ಹೊಂದಿದ್ದೆವು. ಆದರೆ, ಆ ಗುರಿಯನ್ನೂ ಮೀರಿ ಸಾಧನೆ ಮಾಡಿದ್ದೇವೆ. ಹೂಡಿಕೆದಾರರು ಕರ್ನಾಟಕದ ಮೇಲೆ ವಿಶ್ವಾಸವಿಟ್ಟು ಸುಮಾರು ₹10.27 ಲಕ್ಷ ಕೋಟಿ ಹೂಡಿಕೆ ಮಾಡುವ ಬದ್ಧತೆ ವ್ಯಕ್ತಪಡಿಸಿದ್ದರು. ಆದರೆ, ನಮ್ಮ ಪಾಲಿಗೆ ಹೂಡಿಕೆದಾರರ ಸಮಾವೇಶದ ನಿಜವಾದ ಯಶಸ್ಸು ತಿಳಿಯುವುದು ಒಪ್ಪಂದಗಳಿಗೆ ಸಹಿ ಹಾಕಿದ ದಿನವಲ್ಲ. ಕಾರ್ಖಾನೆಗಳು ಕಾರ್ಯಾರಂಭ ಮಾಡುವ ದಿನ. ಕರ್ನಾಟಕದಾದ್ಯಂತ ಅಂದು ವ್ಯಕ್ತಪಡಿಸಿದ ಹೂಡಿಕೆ ಬದ್ಧತೆಗಳು ಈಗ ಭೂಮಿ ಹಂಚಿಕೆ, ಅನುಮೋದನೆ ಮತ್ತು ನಿರ್ಮಾಣ ಹಂತದಲ್ಲಿರುವ ಕೈಗಾರಿಕಾ ಘಟಕಗಳ ರೂಪ ಪಡೆಯುತ್ತಿವೆ. ಈಗಾಗಲೇ ಉತ್ಪಾದನಾ ವಲಯದ ಸುಮಾರು ಶೇಕಡ 65ರಷ್ಟು ಹೂಡಿಕೆಗಳು ಕಾರ್ಯರೂಪಕ್ಕೆ ಬಂದಿವೆ ಎಂದು ಅವರು ವಿವರಿಸಿದ್ದಾರೆ.
ಡಿಎನ್ ಸೊಲುಷನ್ಸ್, ಕ್ರೋನ್ಸ್, ನಿಡೆಕ್ ಮತ್ತು ಫಾಕ್ಸ್‌ಕಾನ್ ಕಂಪನಿಗಳ ಹೂಡಿಕೆಗಳು ದಾಖಲೆ ಅವಧಿಯಲ್ಲಿ ಕಾರ್ಯಾರಂಭ ಮಾಡಿವೆ. ಲ್ಯಾಮ್ ರಿಸರ್ಚ್, ಅಪ್ಲೈಡ್ ಮಟೇರಿಯಲ್ಸ್, ಎಂವೀ, ವಿಪ್ರೊ ಎಲೆಕ್ಟ್ರಾನಿಕ್ ಮಟೇರಿಯಲ್ಸ್, ಜಿಂದಾಲ್ ಅಲ್ಯುಮಿನಿಯಂ ಮತ್ತು ಮಹೀಂದ್ರಾ ಏರೊಸ್ಪೇಸ್-ನ ಪ್ರಮುಖ ಯೋಜನೆಗಳು ಪ್ರಗತಿಯಲ್ಲಿವೆʼ ಎಂದು ಅವರು ನುಡಿದಿದ್ದಾರೆ.
ರಾಜ್ಯದ ಮೂಲೆ ಮೂಲೆಗಳಿಗೂ ಹೂಡಿಕೆ
ರಾಜ್ಯದಲ್ಲಿನ ಹೂಡಿಕೆಗಳು ರಾಜ್ಯದ ಯಾವ ಭಾಗಗಳಿಗೆ ತಲುಪುತ್ತಿವೆ ಎಂಬುದೂ ಅಷ್ಟೇ ಮುಖ್ಯ. ಕಲಬುರಗಿ ಮತ್ತು ಕೊಪ್ಪಳದಿಂದ ಬೆಳಗಾವಿ, ಕೋಲಾರ ಹಾಗೂ ತುಮಕೂರಿನವರೆಗೆ ರಾಜ್ಯದ ಎಲ್ಲ ಪ್ರದೇಶಗಳಿಗೂ ಹೂಡಿಕೆಗಳು ಹರಿದುಬರುತ್ತಿವೆ. ಎಲೆಕ್ಟ್ರಾನಿಕ್ಸ್, ಏರೋಸ್ಪೇಸ್, ವಿದ್ಯುತ್ ಚಾಲಿತ ವಾಹನಗಳು, ಉಕ್ಕು, ಸಿಮೆಂಟ್, ನವೀಕರಿಸಬಹುದಾದ ಇಂಧನ ಮತ್ತು ಜೀವ ವಿಜ್ಞಾನ ಸೇರಿದಂತೆ ಹಲವು ವಲಯಗಳು ಏಕಕಾಲದಲ್ಲಿ ಬೆಳವಣಿಗೆ ಕಾಣುತ್ತಿವೆ. ಈ ಸಮಾರಂಭವು ಈ ಎಲ್ಲ ಸಾಧನೆಗಳನ್ನೂ, ಹೂಡಿಕೆಯ ಭರವಸೆಯನ್ನು ಯೋಜನೆಗಳಾಗಿ ಪರಿವರ್ತಿಸಿದ ಪ್ರತಿಯೊಂದು ಕಂಪನಿಯ ಕೊಡುಗೆಯನ್ನೂ ಸಂಭ್ರಮಿಸುವ ಸಂದರ್ಭ ಇದಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಹೊಸ ಹೆಜ್ಜೆ
ಜಾಗತಿ ಹೂಡಿಕೆದಾರರ ಸಮಾವೇಶ- 2027 ಅನ್ನು ನಿಜವಾದ ಅರ್ಥದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶವನ್ನಾಗಿ ರೂಪಿಸುವುದು ನಮ್ಮ ಸ್ಪಷ್ಟ ಗುರಿಯಾಗಿದೆ. ಇದಕ್ಕಾಗಿ ಮುಂಬರುವ ತಿಂಗಳುಗಳಲ್ಲಿ ನಿರಂತರವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ, ಹೂಡಿಕೆದಾರರು ಇರುವ ಸ್ಥಳಗಳಿಗೇ ಕರ್ನಾಟಕದ ಅವಕಾಶಗಳನ್ನು ಕೊಂಡೊಯ್ಯಲಿದ್ದೇವೆ. ರಾಜ್ಯದ ಎಲ್ಲ ಭಾಗಗಳಿಗೂ ಅಭಿವೃದ್ಧಿಯ ಫಲ ತಲುಪಬೇಕು ಎಂಬುದು ನಮ್ಮ ಆಶಯ. ಈ ನಿಟ್ಟಿನಲ್ಲಿ ಮುಂಬರುವ ತಿಂಗಳುಗಳಲ್ಲಿ ಉತ್ತರ ಕರ್ನಾಟಕದಲ್ಲಿ ವಿಶೇಷ ಹೂಡಿಕೆದಾರರ ಸಮಾವೇಶ ಆಯೋಜಿಸಲಿದ್ದೇವೆ. ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದ ಹೂಡಿಕೆ ಅವಕಾಶಗಳನ್ನು ನೇರವಾಗಿ ಹೂಡಿಕೆದಾರರ ಮುಂದಿಡುವುದು ಇದರ ಉದ್ದೇಶ. ಈ ಪ್ರದೇಶವು ಹಿಂದೆಂದೂ ಕಾಣದ ಪ್ರಮಾಣದಲ್ಲಿ ಹೂಡಿಕೆಯನ್ನು ಆಕರ್ಷಿಸಬೇಕು ಎಂಬುದು ನಮ್ಮ ಗುರಿಯಾಗಿದೆʼ ಎಂದು ಹೇಳಿದರು.
ಹಿಂದಿನ ಬಾರಿ ನಾವು ನಿರೀಕ್ಷೆಗಳನ್ನು ಮೀರಿ ಸಾಧನೆ ಮಾಡಿದ್ದೇವೆ. ಈ ಬಾರಿ ನಿರೀಕ್ಷೆಗಳೂ ಹೆಚ್ಚಿವೆ; ನಮ್ಮ ಮಹತ್ವಾಕಾಂಕ್ಷೆಯೂ ದೊಡ್ಡದಾಗಿದೆ. ನಾವು ಈಗಾಗಲೇ ಸಾಕಷ್ಟು ಸಾಧಿಸಿದ್ದೇವೆ. ಮುಂದಿನ ಹಂತದಲ್ಲಿ ಇನ್ನಷ್ಟು ಹೆಚ್ಚಿನ ಹೂಡಿಕೆ, ಹೆಚ್ಚಿನ ಉದ್ಯೋಗಾವಕಾಶಗಳು, ಬೆಂಗಳೂರಿನ ಆಚೆಗೂ ಕೈಗಾರಿಕಾ ಬೆಳವಣಿಗೆಯ ವಿಸ್ತರಣೆ ಹಾಗೂ ಪ್ರತಿಯೊಬ್ಬ ಹೂಡಿಕೆದಾರರಿಗೂ ಇನ್ನಷ್ಟು ವೇಗವಾದ ಮತ್ತು ಸರಳವಾದ ಅನುಭವವನ್ನು ಒದಗಿಸುವುದು ನಮ್ಮ ಗುರಿಯಾಗಿದೆ ಎಂದು ಪಾಟೀಲ ತಿಳಿಸಿದ್ದಾರೆ.









