ಮೆಟ್ರೋ ಪ್ರಯಾಣಿಕರ ಬಹುನಿರೀಕ್ಷೆಯ ಮತ್ತೊಂದು ನೂತನ ಮಾರ್ಗ ಗುಲಾಬಿ ಲೈನ್‌ನಲ್ಲಿ ಆರು ನಿಲ್ದಾಣಗಳ ಮಧ್ಯೆ ಯಾವಾಗೆಲ್ಲ ರೈಲುಗಳ ಸಂಚಾರ ಮಾಡುತ್ತವೆ. ಬೆಳಗ್ಗೆ ಮತ್ತು ರಾತ್ರಿ ಅಂತಿಮ ರೈಲುಗಳ ಸಂಚಾರ ಸಂಬಂಧಿಸಿದಂತೆ ವೇಳಾಪಟ್ಟಿ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಬಿಡುಗಡೆ ಮಾಡಿದೆ. ಶನಿವಾರ, ಸೋಮವಾರ-ಶುಕ್ರವಾರವರೆಗೆ ಪೀಕ್ ಸಮಯದಲ್ಲಿ ಸಂಚರಿಸುವ ಪ್ರಯಾಣಿಕರು ಗಮನಿಸಿ..
ಪ್ರಧಾನಿ ನರೇಂದ್ರ ಮೋದಿಯವರು ಇಂದು ಬೆಂಗಳೂರಿನಲ್ಲಿ 7.5 ಕಿಮೀ ಉದ್ದದ ಗುಲಾಬಿ ಮಾರ್ಗಕ್ಕೆ ಚಾಲನೆ ನೀಡಿದರು. ಕಾಳೇನ ಅಗ್ರಹಾರ ಮತ್ತು ಎಸ್.ಜಿ. ಪಾಳ್ಯ (ಸುದ್ದಗುಂಟೆ ಪಾಳ್ಯ) ಮೆಟ್ರೋ ನಿಲ್ದಾಣಗಳ ನಡುವಿನ ಗುಲಾಬಿ ಮಾರ್ಗದಲ್ಲಿ ರೈಲು ಸೇವೆಗಳು ಶನಿವಾರ (ನವೆಂಬರ್ 14) ಆರಂಭಗೊಳ್ಳಲಿವೆ.
ಬೆಳಗ್ಗೆ 4.55ಕ್ಕೆ ಸಂಚಾರ! ಪಿಂಕ್ ಲೈನ್ ವೇಳಾಪಟ್ಟಿ ಹೀಗಿದೆ
ಪ್ರತಿ ಸೋಮವಾರದಂದು ಕಾಳೇನ ಅಗ್ರಹಾರದಿಂದ ಬೆಳಗ್ಗೆ 4.55 ಗಂಟೆಗೆ ಹಾಗೂ ಎಸ್.ಜಿ. ಪಾಳ್ಯ ( ಸುದ್ದಗುಂಟೆ ಪಾಳ್ಯ) ಮೆಟ್ರೋ ನಿಲ್ದಾಣದಿಂದ ಬೆಳಗ್ಗೆ 5.00 ಗಂಟೆಗೆ ರೈಲು ಸೇವೆಗಳು ಆರಂಭವಾಗಲಿವೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೂ ಮಂಗಳವಾರದಿಂದ ಶನಿವಾರದವರೆಗೆ, ಕಾಳೇನ ಅಗ್ರಹಾರ ಮತ್ತು ಎಸ್.ಜಿ. ಪಾಳ್ಯ (ಸುದ್ದಗುಂಟೆ ಪಾಳ್ಯ) ಈ ಎರಡೂ ಟರ್ಮಿನಲ್ ನಿಲ್ದಾಣಗಳಿಂದ ಬೆಳಿಗ್ಗೆ 6.00 ಗಂಟೆಯಿಂದ ರೈಲು ಸೇವೆಗಳು ಆರಂಭವಾಗಲಿವೆ. ಭಾನುವಾರದಂದು ಇತರ ಮೂರು (ನೇರಳೆ, ಹಸಿರು ಮತ್ತು ಹಳದಿ ಮೆಟ್ರೋ) ಮೆಟ್ರೋ ಮಾರ್ಗಗಳಂತೆ ಬೆಳಿಗ್ಗೆ 7.00 ಗಂಟೆಯಿಂದ ರೈಲು ಸೇವೆಗಳು ಆರಂಭವಾಗಲಿವೆ.
ಕಾಳೇನ ಅಗ್ರಹಾರದಿಂದ ಕೊನೆಯ ರೈಲು ಸೇವೆಯು ರಾತ್ರಿ 10.50 ಗಂಟೆಗೆ ಹಾಗೂ ಎಸ್.ಜಿ. ಪಾಳ್ಯ (ಸುದ್ದಗುಂಟೆ ಪಾಳ್ಯ) ಮೆಟ್ರೋ ನಿಲ್ದಾಣದಿಂದ ರಾತ್ರಿ 10.54 ಗಂಟೆಗೆ ಹೊರಡಲಿದೆ. ಇದನ್ನು ಗಮನಿಸಿ ಪ್ರಯಾಣಿಕರು ಓಡಾಡುವಂತೆ ಮೆಟ್ರೋ ಕೋರಿದೆ.
8 ನಿಮಿಷಕ್ಕೊಂದು ರೈಲು ಸಂಚಾರ
ಪ್ರಯಾಣಿಕರ ದಟ್ಟಣೆಯ ಅವಧಿಯಲ್ಲಿ ಅಂದರೆ ಬೆಳಗ್ಗೆ ಮತ್ತು ಸಂಜೆ ವೇಳೆ ಪ್ರತಿ 8 ನಿಮಿಷಗಳಿಗೊಮ್ಮೆ ರೈಲುಗಳು ಸಂಚರಿಸಲಿವೆ. ಇತರೆ ಅವಧಿಯಲ್ಲಿ ಪ್ರತಿ 10 ನಿಮಿಷಗಳಿಗೊಮ್ಮೆ ಕಾಳೇನ ಅಗ್ರಹಾರ ಮತ್ತು ಎಸ್.ಜಿ. ಪಾಳ್ಯ (ಸುದ್ದಗುಂಟೆ ಪಾಳ್ಯ) ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸೇವೆಗಳು ಲಭ್ಯವಿರಲಿವೆ.ಶನಿವಾರ ಮತ್ತು ಭಾನುವಾರದಂದು ರೈಲುಗಳು ಪ್ರತಿ 10 ನಿಮಿಷಗಳಿಗೊಮ್ಮೆ ಸಂಚರಿಸಲಿವೆ.
ಮಾರ್ಗದಲ್ಲಿ 5 ಮೆಟ್ರೋ ರೈಲು ಬಳಕೆ
ಸದ್ಯ ನಮ್ಮ ಮೆಟ್ರೋ ಪಿಂಕ್ ಮಾರ್ಗದಲ್ಲಿ ಆರು ರೈಲುಗಳಿವೆ. ಅದರಲ್ಲಿ ಐದು ರೈಲುಗಳನ್ನು ಬಳಸಿಕೊಳ್ಳಲಾಗುತ್ತದೆ. ಒಂದು ರೈಲನ್ನು ತುರ್ತು ಸೇವೆಗೆ ಬಳಸಿಕೊಳ್ಳಲು BMRCL ನಿರ್ಧರಿಸಿದೆ. ರೈಲು ಪ್ರಯಾಣಿಕರ ಸಂಚಾರದ ಗಮನಿಸಿ ಮಾದರಿಯನ್ನು ಆಧರಿಸಿ ರೈಲು ಸೇವೆಗಳ ಆವರ್ತನವನ್ನು ಪರಿಷ್ಕರಿಸಲಾಗುವುದು ಎಂದು ಮೆಟ್ರೋ ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.









