ಸಾಂಸ್ಕೃತಿಕ ವಿಶ್ವಗುರು ಬಸವಣ್ಣ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ರವಿ ಹಂಜ್ ಅವರು ಹಾಗೂ ಅವರ 'ಬಸವ ಮಂಟಪ' ಕೃತಿ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಲಿಂಗಾಯತ ನಾಯಕರು, ಬಸವಪರ ಸಂಘಟನೆಗಳ ಮುಖಂಡರು ಈಗಾಗಲೇ ಪ್ರತಿಭಟನೆ ನಡೆಸಿದ್ದು, ಕ್ರಿಮಿನಲ್ ಮೊಕದ್ದನೆ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಇದರ ಬೆನ್ನಲ್ಲೆ ಮುಖ್ಯಮಂತ್ರಿಗಳ ಜತೆ ಮಾತನಾಡಿ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇವೆ ಎಂದು ಬೃಹತ್ ಕೈಗಾರಿಕಾ ಸಚಿವ ಮತ್ತು ಸಮುದಾಯದ ಮುಖಂಡ ಎಂ.ಬಿ ಪಾಟೀಲ ಎಚ್ಚರಿಕೆ ಕೊಟ್ಟಿದ್ದಾರೆ.
'ಬಸವ ಸಮಿತಿ' ಮುಖಂಡರ ಜೊತೆಗೆ ಸುದ್ದಿಗೋಷ್ಠಿ ನಡೆಸಿದ ಸಚಿವರು, ಮಹತ್ವದ ವಿಚಾರಗಳನ್ನು ಸಮಾಲೋಚಿಸಿದ್ದಾರೆ. ಮಹಾತ್ಮ ಬಸವಣ್ಣನ ವಿಚಾರ, ತತ್ವಗಳಿಗೆ ಅಪಚಾರ ಮಾಡುವಂತಿರುವ ಮತ್ತು ಸಂಶೋಧನೆಯ ಹೆಸರಿನಲ್ಲಿ ಲಿಂಗಾಯತ ಸಮುದಾಯ ಹಾಗೂ ಬಸವಾಭಿಮಾನಿಗಳಿಗೆ ರವಿ ಹಂಜ್ ನೋವುಂಟು ಮಾಡಿದ್ದಾರೆ. ಅವರ 'ಬಸವ ಮಂಟಪ' ಕೃತಿಯನ್ನು ಸಕಾ್ರ ಮುಟ್ಟುಗೋಲು ಹಾಕಿಕೊಳ್ಳಬೇಕು. ಶಾಂತಿ ಕದಡುತ್ತಿರುವ ಇಂತಹ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಆಗ್ರಹಿಸಿದರು.
ಬಸವಣ್ಣನವರ ಮೇಲೇ ಷಡ್ಯಂತ್ರ: ವಿಶ್ವೇಶ್ವರ ಭಟ್ ಕೈವಾಡ
ರವಿ ಹಂಜ್ ಮತ್ತು ಅವರ ಪುಸ್ತಕದ ಪ್ರಕಾಶಕ, ಪತ್ರಕರ್ತ ವಿಶ್ವೇಶ್ವರ ಭಟ್ ವಿರುದ್ಧ ಸಮಿತಿಯ ನೇತೃತ್ವದಲ್ಲಿ ಗುರುವಾರ ಬಸವ ಭವನದಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಇದರ ಬೆನ್ನಲ್ಲೇ ಸಮಿತಿಯು ಹಂಜ್ ಮತ್ತು ಭಟ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಪೊಲೀಸರಿಗೆ ದೂರು ನೀಡಿದ್ದಾಗಿ ಸಚಿವರಿಗೆ ತಿಳಿಸಿದರು.
ವಿಶ್ವಗುರು ಬಸವಣ್ಣನ ವಿರುದ್ಧ ಮೊದಲಿನಿಂದಲೂ ಷಡ್ಯಂತ್ರ ನಡೆಯುತ್ತಲೇ ಇದೆ. ಸಮಾನತೆ, ಜಾತಿರಹಿತ ಸಮಾಜ, ಕಾಯಕ ತತ್ತ್ವ, ಸಂಸತ್ತಿನ ಪರಿಕಲ್ಪನೆ ಇವೆಲ್ಲವನ್ನೂ ಜಗತ್ತಿಗೆ ಸಾರಿದ ಬಸವಣ್ಣನನ್ನು ಕೊಲೆಗಡುಕ, ಕಳ್ಳ, ಲೋಟಿಕೋರ ಎಂದೆಲ್ಲ ರವಿ ಹಂಜ್ ವಾಗ್ದಾಳಿ ನಡೆಸಿದ್ದಾರೆ. ಇದರ ಹಿಂದೆ ವಿಶ್ವೇಶ್ವರ ಭಟ್ ಅವರ ಕೈವಾಡವಿದೆ ಎಂದು ಆರೋಪಿಸಿದರು.
ಆಕ್ಷೇಪ ಎದುರಾಗುತ್ತಿದ್ದಂತೆ ವಿರೋಧವನ್ನು ಕಂಡು ಹಂಜ್ ಅವರು ಕ್ಷಮೆ ಮತ್ತು ತಿದ್ದುಪಡಿಯ ನಾಟಕವಾಡಿದ್ದಾರೆ. ವೀರಶೈವ-ಲಿಂಗಾಯತ ಸಮುದಾಯದ ಸೌಮ್ಯ ಸ್ವಭಾವವನ್ನೇ ದೌರ್ಬಲ್ಯ ಎಂದುಕೊಂಡಿದ್ದಾರೆ. 'ಬಸವ ಮಂಟಪ' ಕೃತ್ಯಕ್ಕೆ ಸಂಶೋಧನೆಯ ಮುಖವಾಡ ತೊಡಿಸಿರುವುದು ಖಂಡನೀಯ ಎಂದರು.
ಸೈದ್ಧಾಂತಿಕ ಸಂಚು
ಬಸವಣ್ಣನನ್ನು 'ಕರ್ನಾಟಕದ ಸಾಂಸ್ಕೃತಿಕ ನಾಯಕ' ಎಂದು ಸರ್ಕಾರ ಘೋಷಿಸಿದ ಮೇಲೆ ಇಂತಹ ವಿಕೃತ ಬೆಳವಣಿಗೆಗಳು ಮೇರೆ ಮೀರಿವೆ. 12ನೇ ಶತಮಾನದಲ್ಲಿ ನಡೆದ ಐತಿಹಾಸಿಕ ಸಂಘರ್ಷಗಳನ್ನು ಕೃತಿಯಲ್ಲಿ ತಿರುಚಲಾಗಿದೆ. ರಾಷ್ಟ್ರಕವಿ ಕುವೆಂಪು ಕೂಡ ಬಸವಣ್ಣನನ್ನು ಮುಕ್ತವಾಗಿ ಪ್ರಶಂಸಿಸಿದ್ದಾರೆ. ಇದೆಲ್ಲವೂ ಶರಣ ತತ್ತ್ವ ಮತ್ತು ಲಿಂಗಾಯತ ಅಸ್ಮಿತೆಯನ್ನು ಬುಡಮೇಲು ಮಾಡುತ್ತಿರುವ ಸೈದ್ಧಾಂತಿಕ ಸಂಚಾಗಿದೆ. ಇದರ ಹಿಂದೆ ಯಾರ್ಯಾರಿದ್ದಾರೆ ಎನ್ನುವುದು ಗೊತ್ತಿದೆ. ಎಲ್ಲ ಸಮುದಾಯಗಳೂ ಖಂಡಿಸಬೇಕೆಂದು ಅವರು ಕರೆ ನೀಡಿದರು.
ಆಳಂದ ಶಾಸಕ ಬಿ.ಆರ್ ಪಾಟೀಲ ಮಾತನಾಡಿ, 'ಬಸವಣ್ಣ, ಗಾಂಧಿ, ಅಂಬೇಡ್ಕರ್ ವಿಚಾರಗಳನ್ನು ಸಹಿಸದ ವಿಕೃತಿ ಹಿಂದಿನಿಂದಲೂ ಇದೆ. ರವಿ ಹಂಜ್ ದುರುದ್ದೇಶದಿಂದ ಪುಸ್ತಕ ಬರೆದಿದ್ದಾರೆ. ಇದು ನಿಲ್ಲದಿದ್ದರೆ ಸಮಾಜದಲ್ಲಿ ಶಾಂತಿಗೆ ಭಂಗ ಬರುತ್ತದೆ. ಇದುವರೆಗೆ ಜಗತ್ತಿನ 143 ಭಾಷೆಗಳಿಗೆ ಬಸವಣ್ಣನ ವಚನಗಳು ಭಾಷಾಂತರವಾಗಿವೆ. ನಾವೀಗ ರಾಜ್ಯದಲ್ಲಿ ಬೀದಿಗಿಳಿದು ಹೋರಾಡುವುದು ಅನಿವಾರ್ಯ' ಎಂದು ಎಚ್ಚರಿಸಿದರು.
ಬ್ರಿಟನ್ ನಲ್ಲಿ ಇರುವ ಕನ್ನಡಿಗ ನೀರಜ್ ಪಾಟೀಲ್, ಚಿಂತಕ ಜೆ.ಎಸ್ ಪಾಟೀಲ್ ಅವರೂ ಮಾತನಾಡಿ ಲೇಖಕ ಹಾಗೂ ಪ್ರಕಾಶಕರ ವಿರುದ್ಧ ಉಗ್ರ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಮಾಜಿ ಮೇಯರ್ ಗಂಗಾಂಬಿಕ ಮಲ್ಲಿಕಾರ್ಜುನ್, ಮಾಜಿ ಉಪ ಮೇಯರ್ ಪುಟ್ಟರಾಜು ಮುಂತಾದವರಿದ್ದರು.
ಲಿಂಗಾಯತರ ಮೇಲಿನ ದಾಳಿ ಮಿತಿ ಮೀರಿದೆ: ಎಂಬಿ ಪಾಟೀಲ್
ಸುದ್ದಿಗೋಷ್ಠಿ ಬಳಿಕ ಮಾತನಾಡಿದ ಸಚಿವ ಎಂಬಿ ಪಾಟೀಲ್ ಅವರು, ಬಸವಣ್ಣ ಮತ್ತು ಲಿಂಗಾಯತ ಸಮುದಾಯದ ಮೇಲಿನ ವಿಕೃತ ದಾಳಿ ಮೇರೆ ಮೀರಿದ್ದು, ಸಹಿಸುವುದಿಲ್ಲ. ಈಗಾಗಲೇ ರಾಜ್ಯದ ಹಲವೆಡೆಗಳಲ್ಲಿ ಇದರ ವಿರುದ್ಧ ಪ್ರತಿಭಟನೆ ಆರಂಭವಾಗಿದ್ದು, ನಾವು ಬೀದಿಗಿಳಿದು ಉಗ್ರ ಹೋರಾಟ ಮಾಡುತ್ತೇವೆ. ನೆರೆಯ ಮಹಾರಾಷ್ಟ್ರದಲ್ಲೂ ರವಿ ಹಂಜ್ ವಿರುದ್ಧ ಪ್ರತಿಭಟನೆ ಶುರುವಾಗಿದೆ.
ಈ ಬೆಳವಣಿಗೆ ಕುರಿತು ನಾನು ಮತ್ತು ಶರಣ್ ಪ್ರಕಾಶ ಪಾಟೀಲ ಸೇರಿದಂತೆ ಇತರ ಸಚಿವರು ಮುಖ್ಯಮಂತ್ರಿಗಳ ಜತೆ ಮಾತನಾಡುತ್ತೇವೆ. ರವಿ ಹಂಜ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇವೆ ಎಂದು ಎಂದು ಹೇಳಿದರು.
ಬಿದರಿ, ಬಳಿಗಾರ್ ನಡೆ ಖಂಡನೀಯ
'ನನಗೆ ರವಿ ಹಂಜ್ ಹೆಸರು ಹೇಳಲೂ ನಾಚಿಕೆಯಾಗುತ್ತಿದೆ. ಅಂತಹ ವ್ಯಕ್ತಿಯ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ವೀರಶೈವ ಮಹಾಸಭಾದ ಅಧ್ಯಕ್ಷ ಶಂಕರ ಬಿದರಿ ಮತ್ತು ಕಸಾಪ ಮಾಜಿ ಅಧ್ಯಕ್ಷ ಮನು ಬಳಿಗಾರ್ ಹೋಗಿರುವುದು ಖಂಡನೀಯ. ಇವರಿಬ್ಬರೂ 21ನೇ ಶತಮಾನದ ಕೊಂಡಿ ಮಂಚಣ್ಣರು. ಬಿದರಿ ವಿರುದ್ಧ ಕ್ರಮ ಕೈಗೊಳ್ಳವುದು ವೀರಶೈವ ಮಹಾಸಭಾಗೆ ಬಿಟ್ಟಿದ್ದು ಎಂದರು.
ಹಂಜ್, ವಿಶ್ವೇಶ್ವರ ಭಟ್ ಮಿತಿ ಮೀರಿದ್ದಾರೆ!
'ಬಸವಣ್ಣ, ಶರಣ ಸಂಸ್ಕೃತಿಗೆ ಅಪಚಾರ ಮಾಡುತ್ತಿರುವುದರ ಹಿಂದೆ ಷಡ್ಯಂತ್ರವಿದೆ. ಉತ್ತರ ಕರ್ನಾಟಕದಲ್ಲೂ ಈ ಶಕ್ತಿಗಳು ಒಬ್ಬ ಸ್ವಾಮೀಜಿಯ ಮೂಲಕ ಈ ಕೆಲಸ ಮಾಡಿಸುತ್ತಿವೆ. ಇವೆಲ್ಲದರ ವಿರುದ್ಧ ಸಿರಿಗೆರೆ, ಭಾಲ್ಕಿ, ಗದಗ, ಸುತ್ತೂರು ಸೇರಿದಂತೆ ಎಲ್ಲ ಸ್ವಾಮೀಜಿಗಳು ಧ್ವನಿ ಎತ್ತಲಿದ್ದಾರೆ. ನಮ್ಮ ಧರ್ಮದ ತಂಟೆಗೆ ಬಂದರೆ ಸುಮ್ಮನಿರಲ್ಲ. ರವಿ ಹಂಜ್ ಮತ್ತು ವಿಶ್ವೇಶ್ವರ ಭಟ್ ಇಬ್ಬರೂ ತಮ್ಮ ಮಿತಿ ಮೀರಿದ್ದಾರೆ' ಎಂದು ಆಕ್ರೋಶ ಹೊರ ಹಾಕಿದರು.
'ಬೇರೆ ಸಮುದಾಯದ ಬಗ್ಗೆ ಹೀಗೇನಾದರೂ ಮಾಡಿದ್ದರೆ ಇಷ್ಟು ಹೊತ್ತಿಗೆ ಪರಿಣಾಮ ಬೇರೆಯಾಗುತ್ತಿತ್ತು. ಹಿಂದೆ ಕೆಂಪೇಗೌಡರ ವಿಚಾರದಲ್ಲಿ ಉರಿಗೌಡ, ನಂಜೇಗೌಡ ಎನ್ನುವ ಕಾಲ್ಪನಿಕ ವ್ಯಕ್ತಿಗಳನ್ನು ಮುನ್ನೆಲೆಗೆ ತಂದಾಗ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ಒಂದು ಎಚ್ಚರಿಕೆಗೆ ಆ ಆಟವೆಲ್ಲ ನಿಂತುಹೋಯಿತು. ಈಗ ವೀರಶೈವ-ಲಿಂಗಾಯತ ಸಮುದಾಯ ಒಗ್ಗಟ್ಟಿನಿಂದ ಇರಬೇಕು ಎಂದು ಕರೆ ನೀಡಿದರು.
ಬಸವಣ್ಣ ಲಿಂಗಾಯತರ ಅಸ್ಮಿತೆ, ವಿಶ್ವದ ತಂದೆ. ಹಂಜ್ ಆಡಿದ ಮಾತುಗಳು ಮತ್ತು ಪುಸ್ತಕದಿಂದ ಬಸವಾಭಿಮಾನಿಗಳಿಗೆ ಆಘಾತವಾಗಿದೆ. ಇದರಲ್ಲಿ ರಾಜಿ ಸಾಧ್ಯವೇ ಇಲ್ಲ. ನಾನು ಈಗ ಆತ್ಮಚರಿತ್ರೆ ಬರೆಯುತ್ತಿದ್ದೇನೆ. ಇಲ್ಲಿ ಇದುವರೆಗೂ ಗೊತ್ತಿಲ್ಲದ ಅನೇಕ ಸತ್ಯಗಳನ್ನು ನಾನು ದಾಖಲಿಸುತ್ತಿದ್ದೇನೆ ಎಂದು ಪಾಟೀಲ ಹೇಳಿದರು.
ಕೃತಿ ಬಿಡುಗಡೆ ವೇಳೆ ರವಿ ಹಂಜ್ ಆಕ್ಷೇಪಾರ್ಹ ಹೇಳಿಕೆ
ಕಳೆದ ಒಂದೆರಡು ವರ್ಷಗಳಿಂದಲೂ ಸೋಷಿಯಲ್ ಮೀಡಿಯಾಗಳಲ್ಲಿ ಬಸವತತ್ವ, ಲಿಂಗಾಯತ ಧರ್ಮ, ಬಸವಾದಿ ಶರಣರು, ಮಠಾಧೀಶರು ಅಲ್ಲದೇ ಬಸವಪರ ಹೋರಾಟಗಾರರ ವಿರುದ್ಧ ರವಿ ಹಂಜ್ ಲೇಖನ ಪ್ರಕಟಿಸುತ್ತಾ ಬಂದಿದ್ದಾರೆ. ಇದೀಗ ಆ ಎಲ್ಲ ಲೇಖನಗಳ 600 ಪುಟಗಳ 'ಬಸವ ಮಂಟಪ' ಕೃತಿ ರಚಿಸಿ, ಕಳೆದ ಭಾನುವಾರ (ನ.15) ಬಿಡುಗಡೆ ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಬರುವಂತೆ ವಿಶ್ವೇಶ್ವರ ಭಟ್ ಸಹ ಆಹ್ವಾನಿಸಿದ್ದರು.
ಕೃತಿ ಬಿಡುಗಡೆ ವೇಳೆ ಬಸವಣ್ಣನವರ ಕುರಿತು ಆಕ್ಷೇಪಾರ್ಹವಾಗಿ ಮಾತನಾಡಿರುವುದು ವೀರಶೈವ, ಲಿಂಗಾಯತ ಸೇರಿ ಇಡೀ ಸಮುದಾಯಗಳ ಕೆಂಗಣಿಗೆ ಗುರಿಯಾಗಿದೆ. ಬಸವಣ್ಣನವರ 'ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ' ವಚನವನ್ನು ತಪ್ಪಾಗಿ ಅರ್ಥೈಸಿದ್ದಾರೆ. ಇದಕ್ಕೆಲ್ಲ ಪತ್ರಕರ್ತ ವಿಶ್ವೇಶ್ವರ ಭಟ್ರ ಕುಮ್ಮಕ್ಕಿದೆ, ಬಸವಣ್ಣನವರ ವಿರುದ್ಧ ಷಡ್ಯಂತ್ರ, ಅಪಪ್ರಚಾರದಲ್ಲಿ ಅವರ ಕೈವಾಡವೂ ಇದೆ ಎನ್ನಲಾಗಿದೆ.
ಈ ಸಂಬಂಧ ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಬಸವರಾಜ ಕನ್ನೂರು, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಸೇರಿದಂತೆ ಲಿಂಗಾಯತ ಶಾಸಕರು, ನಾಯಕರು ಒಕ್ಕೋರಲಿನಿಂದ ಹಂಜ್ ವಿರುದ್ಧ ಕ್ರಮ ಜರುಗಿಸಲು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.








