ಕೃತಕ ಬುದ್ಧಿಮತ್ತೆ (AI) ಬಳಸಿ ನಟಿಯರ ಡೀಪ್ಫೇಕ್ ವಿಡಿಯೋಗಳನ್ನು ಸೃಷ್ಟಿಸುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಟಿ ಮೃಣಾಲ್ ಠಾಕೂರ್ ಕಿಡಿಗೇಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ರಶ್ಮಿಕಾ ಮಂದಣ್ಣ, ರುಕ್ಮಿಣಿ ವಸಂತ್ ಸೇರಿದಂತೆ ಹಲವು ನಟಿಯರು ಈ ರೀತಿಯ ದುರ್ಬಳಕೆಯ ವಿರುದ್ಧ ಧ್ವನಿ ಎತ್ತಿದ್ದು, ಇದೀಗ ಮೃಣಾಲ್ ಠಾಕೂರ್ ಕೂಡ ಕಾನೂನು ಹೋರಾಟಕ್ಕೆ ಸಜ್ಜಾಗಿದ್ದಾರೆ.
ಇನ್ಸ್ಟಾಗ್ರಾಂ ಮತ್ತು ಎಕ್ಸ್ ಖಾತೆಗಳಲ್ಲಿ ಈ ಕುರಿತು ಎಚ್ಚರಿಕೆ ನೀಡಿರುವ ಮೃಣಾಲ್, ತಮ್ಮ ಫೋಟೋ, ವಿಡಿಯೋ ಅಥವಾ ಧ್ವನಿಯನ್ನು ಬಳಸಿಕೊಂಡು ಡೀಪ್ಫೇಕ್ಗಳನ್ನು ಸೃಷ್ಟಿಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ. “ನನ್ನ ಕುರಿತು ಡೀಪ್ಫೇಕ್ ಸೃಷ್ಟಿಸಿದರೆ ಕಾನೂನು ಕ್ರಮ ಕೈಗೊಳ್ಳುತ್ತೇನೆ. ಇದನ್ನು ನಿಮಗೆ ನೀಡಲಾಗಿರುವ ಅಧಿಕೃತ ಸೂಚನೆ ಎಂದು ಪರಿಗಣಿಸಿ” ಎಂಬ ಸಂದೇಶದ ಮೂಲಕ ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
AI ತಂತ್ರಜ್ಞಾನ ಬಳಸಿ ನಟಿಯರ ಗುರುತು, ಚಿತ್ರಗಳು ಮತ್ತು ಧ್ವನಿಗಳನ್ನು ಅನುಮತಿಯಿಲ್ಲದೆ ಬಳಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಮೃಣಾಲ್ ಠಾಕೂರ್ ಅವರ ಹೆಸರಿನಲ್ಲಿ ಕೂಡ ಡೀಪ್ಫೇಕ್ ವಿಡಿಯೋಗಳು ಹರಿದಾಡುತ್ತಿರುವ ಮಾಹಿತಿ ಅವರಿಗೆ ಲಭ್ಯವಾದ ಹಿನ್ನೆಲೆಯಲ್ಲಿ ಅವರು ಈ ಅಧಿಕೃತ ವಾರ್ನಿಂಗ್ ನೀಡಿದ್ದಾರೆ. AI ಮೂಲಕ ವ್ಯಕ್ತಿಯ ಗುರುತನ್ನು ದುರ್ಬಳಕೆ ಮಾಡುವುದು ಕಾನೂನುಬಾಹಿರವಾಗಿದ್ದು, ಯಾವುದೇ ಕಾರಣಕ್ಕೂ ಸ್ವೀಕಾರಾರ್ಹವಲ್ಲ ಎಂದು ಮೃಣಾಲ್ ಸ್ಪಷ್ಟಪಡಿಸಿದ್ದಾರೆ.









