ಬೆಂಗಳೂರಿನ ಆಸ್ತಿದಾರರಿಗೆ ಕರ್ನಾಟಕ ಸರ್ಕಾರವು ಭರ್ಜರಿ ಗುಡ್ನ್ಯೂಸ್ ಕೊಟ್ಟಿದೆ. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ 50x80 ಅಡಿ ವರೆಗಿನ ವಸತಿ ನಿವೇಶನಗಳಲ್ಲಿ ಗರಿಷ್ಠ 4 ವಸತಿ ಘಟಕಗಳವರೆಗೆ ಕಟ್ಟಡ ನಿರ್ಮಾಣಕ್ಕೆ ಸಂಪೂರ್ಣ ಸ್ವಯಂಚಾಲಿತ ಕಟ್ಟಡ ನಕ್ಷೆ ಮಂಜೂರಾತಿ ವ್ಯವಸ್ಥೆಯನ್ನು ಒಳಗೊಂಡ 'ನಂಬಿಕೆ ನಕ್ಷೆ 2.0' ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಇದನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಸೆಪ್ಟೆಂಬರ್ 19ರ ಶನಿವಾರ ಲೋಕಾರ್ಪಣೆ ಮಾಡಿದರು.
ಜನರಿಗೆ ಸರಳ, ವೇಗದ ಹಾಗೂ ಪಾರದರ್ಶಕ ಆಡಳಿತ ಒದಗಿಸುವ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿರ್ದೇಶನದಂತೆ ಕಟ್ಟಡ ನಕ್ಷೆ ಮಂಜೂರಾತಿ ಪ್ರಕ್ರಿಯೆಯನ್ನು ಮತ್ತಷ್ಟು ಜನಸ್ನೇಹಿಗೊಳಿಸುವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವ ಕೃಷ್ಣಬೈರೇಗೌಡ ಅವರು ಹೇಳಿದ್ದಾರೆ. ಈ ಹಿಂದೆ ಕಟ್ಟಡ ನಕ್ಷೆ ಮಂಜೂರಾತಿಗಾಗಿ ದಾಖಲೆಗಳನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡುವ ನಂಬಿಕೆ ನಕ್ಷೆ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. ಈ ವ್ಯವಸ್ಥೆಯ ಅನುಷ್ಠಾನದ ನಂತರವೂ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಿ, ಸಾರ್ವಜನಿಕರಿಗೆ ವೇಗವಾಗಿ ಸೇವೆ ಒದಗಿಸುವ ಅಗತ್ಯವನ್ನು ಮನಗಂಡು, ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ನೀಡಿದ ನಿರ್ದೇಶನದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ 'ನಂಬಿಕೆ ನಕ್ಷೆ 2.0' ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದು ಹೇಳಿದ್ದಾರೆ.
4000 ಚದರ ಅಡಿ (50x80 ಅಡಿ) ವರೆಗಿನ ವಸತಿ ಕಟ್ಟಡಗಳ ಕಟ್ಟಡ ನಕ್ಷೆ ಮಂಜೂರಾತಿಯನ್ನು ಸಂಪೂರ್ಣವಾಗಿ ಆನ್ಲೈನ್ ಮೂಲಕ ಪಡೆಯಬಹುದಾಗಿದೆ. ಅರ್ಹತೆ ಹೊಂದಿರುವ ವಾಸ್ತುಶಿಲ್ಪಿ (Architect) ಮೂಲಕ ಕಟ್ಟಡ ನಕ್ಷೆಯನ್ನು ಆನ್ಲೈನ್ನಲ್ಲಿ ಸಲ್ಲಿಸಬಹುದಾಗಿದೆ. ಸಲ್ಲಿಸಲಾದ ನಕ್ಷೆಯು ನಗರ ಯೋಜನಾ ನಿಯಮಗಳಿಗೆ ಅನುಗುಣವಾಗಿದ್ದಲ್ಲಿ, ಸ್ವಯಂಚಾಲಿತವಾಗಿ ಸುಮಾರು 30 ನಿಮಿಷಗಳೊಳಗೆ ಕಟ್ಟಡ ನಕ್ಷೆ ಮಂಜೂರಾತಿ ದೊರೆಯುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದರು.
ಇನ್ನು 'ನಂಬಿಕೆ ನಕ್ಷೆ 2.0' ವ್ಯವಸ್ಥೆಯಲ್ಲಿ ಸಾರ್ವಜನಿಕರು ಖಾತಾ ದಾಖಲೆ ಸೇರಿದಂತೆ ಹಲವು ದಾಖಲೆಗಳನ್ನು ಪ್ರತ್ಯೇಕವಾಗಿ ಅಪ್ಲೋಡ್ ಮಾಡುವ ಅಗತ್ಯವಿಲ್ಲ. ಇ-ಖಾತಾ ಸಂಖ್ಯೆಯನ್ನು ನಮೂದಿಸಿದ ಕೂಡಲೇ ಸಂಬಂಧಿತ ಆಸ್ತಿಯ ಮೂಲ ಮಾಲೀಕತ್ವದ ಮಾಹಿತಿಯನ್ನು ವ್ಯವಸ್ಥೆಯೇ ಸ್ವಯಂಚಾಲಿತವಾಗಿ ಪಡೆದುಕೊಳ್ಳಲಿದೆ. ಕಟ್ಟಡ ನಕ್ಷೆ ಮಂಜೂರಾತಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್ಲೈನ್ ಹಾಗೂ ಸ್ವಯಂಚಾಲಿತಗೊಳಿಸುವ ಮೂಲಕ ಮಧ್ಯವರ್ತಿಗಳ ಹಸ್ತಕ್ಷೇಪವನ್ನು ತಡೆಯ ಲಾಗುತ್ತಿದೆ. ಸಾರ್ವಜನಿಕರ ಅಮಾಯಕತೆಯನ್ನು ದುರುಪಯೋಗಪಡಿಸಿಕೊಂಡು ವಂಚನೆ ಅಥವಾ ಶೋಷಣೆ ನಡೆಯದಂತೆ ಪಾರದರ್ಶಕ ಹಾಗೂ ಜನಸ್ನೇಹಿ ಆಡಳಿತ ವ್ಯವಸ್ಥೆಯನ್ನು ರೂಪಿಸುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದಿದ್ದಾರೆ.
ಈ ಹಿಂದೆ ಕಟ್ಟಡ ನಕ್ಷೆ ಮಂಜೂರಾತಿಗೆ 2ರಿಂದ 3 ತಿಂಗಳವರೆಗೆ ಸಮಯ ಬೇಕಾಗುತ್ತಿತ್ತು. ಇದೀಗ ನಿಯಮಾನುಸಾರ ಸಲ್ಲಿಕೆಯಾಗುವ ಕಟ್ಟಡ ನಕ್ಷೆಗಳಿಗೆ ಸುಮಾರು 30 ನಿಮಿಷಗಳಲ್ಲೇ ಮಂಜೂರಾತಿ ದೊರೆಯುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
'ನಂಬಿಕೆ ನಕ್ಷೆ 2.0' ವ್ಯವಸ್ಥೆಯನ್ನು ಮೊದಲ ಹಂತದಲ್ಲಿ ಆಯ್ದ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದೆ. ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿ, ಅಗತ್ಯ ಸುಧಾರಣೆಗಳನ್ನು ಕೈಗೊಂಡ ನಂತರ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಇತರ ಪ್ರದೇಶಗಳಿಗೂ ವಿಸ್ತರಿಸಲಾಗುವುದು. ನಗರ ಯೋಜನಾ ನಿಯಮಗಳನ್ನು ಪಾಲಿಸಿ ಕಟ್ಟಡ ನಿರ್ಮಾಣ ಮಾಡಲು ಬಯಸುವ ನಾಗರಿಕರಿಗೆ ಪ್ರಕ್ರಿಯೆಯನ್ನು ಸುಲಭ, ವೇಗದ ಹಾಗೂ ಪಾರದರ್ಶಕಗೊಳಿಸುವುದು ಈ ವ್ಯವಸ್ಥೆಯ ಉದ್ದೇಶವಾಗಿದೆ.
ಅಲ್ಲದೇ, ಮುಂದಿನ ಹಂತದಲ್ಲಿ ವಾಣಿಜ್ಯ ಕಟ್ಟಡಗಳು ಹಾಗೂ ದೊಡ್ಡ ವಿಸ್ತೀರ್ಣದ ಕಟ್ಟಡಗಳಿಗೂ ಸರಳೀಕೃತ ಹಾಗೂ ತಂತ್ರಜ್ಞಾನ ಆಧಾರಿತ ಮಂಜೂರಾತಿ ವ್ಯವಸ್ಥೆಯನ್ನು ರೂಪಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು. ಜನರ ಹಾಗೂ ಅರ್ಹ ಆರ್ಕಿಟೆಕ್ಟ್ ಮೇಲೆ ನಂಬಿಕೆಯಿಟ್ಟು ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ವ್ಯವಸ್ಥೆಯ ದುರುಪಯೋಗ ಕಂಡುಬಂದಲ್ಲಿ, ಅಂತಹವರರಿಗೆ ದುಬಾರಿ ಶಿಕ್ಷೆ ವಿಧಿಸಲಾಗುವುದಾಗಿ ಸಚಿವರು ಎಚ್ಚರಿಸಿದರು.








